ಬುಧವಾರ, ಸೆಪ್ಟೆಂಬರ್ 16, 2009

ಜಪಾನೀಯರ ಗೊಂಬೆ ಹಬ್ಬ - ಭಾರತೀಯರ ನವರಾತ್ರಿ

ಜಪಾನೀಯರ ಗೊಂಬೆ ಹಬ್ಬ - ಹಿನಾ ಮತ್ಸೂರಿ

ಜಪಾನೀಯರು `ಹಿನಾ ಮತ್ಸೂರಿ' (Hina Matsuri) ಎಂಬ ಹಬ್ಬವನ್ನು ಆಚರಿಸುತ್ತಾರೆ. ಹಿನಾ ಎಂದರೆ, ಗೊಂಬೆ ಮತ್ತು ಮತ್ಸೂರಿ ಎಂದರೆ, ಹಬ್ಬ ಎಂದು ಜಪಾನೀ ಭಾಷೆಯಲ್ಲಿ ಅರ್ಥವಿದೆ. ಈ ಹಬ್ಬವನ್ನು `ಗೊಂಬೆಗಳ ಹಬ್ಬ' ಅಥವಾ `ಹೆಣ್ಣುಮಕ್ಕಳ ಹಬ್ಬ' ಎಂತಲೂ ಕರೆಯುತ್ತಾರೆ. ಪ್ರತಿ ವರ್ಷದ ಮಾರ್ಚ್‍ ತಿಂಗಳ ಮೂರನೇ ದಿನ, ಈ ಹಬ್ಬವನ್ನು ಜಪಾನ್‍ ದೇಶದ ಎಲ್ಲೆಡೆ ಆಚರಿಸುತ್ತಾರೆ.

ಹಬ್ಬವು ಫೆಬ್ರವರಿ ತಿಂಗಳ ಮಧ್ಯದಿಂದ ಆರಂಭವಾಗಿ, ಮಾರ್ಚ್‍ ಮೂರನೆಯ ದಿನಕ್ಕೆ ಕೊನೆಗೊಳ್ಳುತ್ತದೆ. ಈ ದಿನ ಜಪಾನೀಯರು ತಮ್ಮ ಮನೆಗಳಲ್ಲಿ ಐದು, ಏಳು ಸಾಲಿನಲ್ಲಿ ಮಂಟಪದಲ್ಲಿ/ಮಂಟಪದ ಆಕಾರದಲ್ಲಿ ಮಣೆಗಳನ್ನು ಮೆಟ್ಟಿಲಿನಂತೆ ಇಟ್ಟು, ಅದರ ಮೇಲೆ ಕೆಂಪು ವಸ್ತ್ರವನ್ನು ಹಾಸುತ್ತಾರೆ. ಅದರ ಮೇಲೆ ರಾಜ/ಯುವರಾಜ (ಓದೈರಿ-ಸಮ) ಮತ್ತು ರಾಣಿ/ಯುವರಾಣಿ (ಓಹಿನ-ಸಮ) ಗೊಂಬೆಗಳನ್ನು ಮೊದಲಿನ ಎತ್ತರದ ಸ್ಥಳದಲ್ಲಿ ಇಡುತ್ತಾರೆ. ನಂತರದ ಸ್ಠಾನದಲ್ಲಿ, ದಾಸಿಯರು, ಪರಿಚಾರಕರು ಇತ್ಯಾದಿ ಗೊಂಬೆಗಳು. ಮೂರು ಮತ್ತು ನಾಲ್ಕನೆಯ ಸಾಲಿನಲ್ಲಿ ಕವಿಗಳು, ಮಂತ್ರಿಗಳು ಹೀಗೆ ಅರಮನೆಯಲ್ಲಿನ ಮುತ್ಸದ್ದಿಗಳನ್ನು ಬಿಂಬಿಸುವ ಗೊಂಬೆಗಳು ಇಡಲ್ಪಡುತ್ತವೆ. ಮಧ್ಯೆ, ಮಧ್ಯೆ ಸಿಹಿ ತಿಂಡಿಗಳನ್ನು ಇಡುತ್ತಾರೆ. ಐದನೆಯ ಸಾಲಿನಲ್ಲಿ, ಸೈನಿಕರು, ಪ್ರಜಾ ಸಮೂಹ, ಇವುಗಳನ್ನು ಪ್ರತಿನಿಧಿಸುವಂತಹ ಗೊಂಬೆಗಳನ್ನು ಇಡುತ್ತಾರೆ. ಮಂಟಪದ ಬಲ ಮತ್ತು ಎಡ ಬದಿಯಲ್ಲಿ ಚೆರ್ರಿ, ಕಿತ್ತಳೆ ಮರಗಳನ್ನು ಅಲಂಕರಿಸುತ್ತಾರೆ.

ಈ ಹಬ್ಬದ ದಿನ ಅಕ್ಕಿಯಿಂದ ಮಾಡಿದ ಕೇಕ್‍, ಪೀಚ್ (Peach) ಎಂಬ ಹಣ್ಣಿನ ಹೂಗಳು, ವಿಶೇಷ ಬಣ್ಣಗಳಿಂದ, ವಜ್ರಕೋನಾಕೃತಿಯಲ್ಲಿ ತಯಾರಿಸಿದ ಕೇಕ್‍ಗಳು, ವ್ಹೈಟ್ ಸೇಕ್ (ಹಿತೆ ಶಕೆ) ಎಂಬ ವಿಶಿಷ್ಟ ಪೇಯ ಹಾಗೂ ಅನೇಕ ವಿಧದ ಸಿಹಿ ತಿಂಡಿಗಳನ್ನು ಗೊಂಬೆಗಳಿಗೆ ನಿವೇದಿಸುತ್ತಾರೆ.

ಈ ಹಬ್ಬವು ಜಪಾನಿನಲ್ಲಿ ಯಾವಾಗ, ಹೇಗೆ ಆಚರಣೆಗೆ ಬಂದಿತು ಎಂದು ಅಧಿಕೃತವಾಗಿ ಹೇಳುವುದು ಸ್ವಲ್ಪ ಕಷ್ಟಕರ. ಏಕೆಂದರೆ, ಮೊದಲು ಚೀನೀಯರು ಆಚರಿಸುತ್ತಿದ್ದ ಈ ಹಬ್ಬವು ಇಡೋ ಶಕೆ (Edo Period, 1603-1867) ಯಲ್ಲಿ ಆಚರಣೆಗೆ ಬಂದಿತೆಂದು ತಿಳಿದುಬರುತ್ತದೆ.

ಹಬ್ಬದ ವಿಶೇಷತೆಯೆಂದರೆ, ಚೀನೀಯರಲ್ಲಿದ್ದ ನಂಬಿಕೆಯಂತೆ ಇಲ್ಲಿಯೂ ಆಚರಿಸುತ್ತಾರೆ. ಅದೇನೆಂದರೆ, ಕಾಗದದ ಗೊಂಬೆಗಳನ್ನು ಮಾಡಿ ಅವುಗಳನ್ನು ಈ ಮಾರ್ಚ್‍ ಮೂರನೆಯ ದಿನ ನದಿಗಳಿಗೆ ಬಿಡದಿದ್ದರೆ, ತಮ್ಮ ಹೆಣ್ಣು ಮಕ್ಕಳಿಗೆ ಅನಿಷ್ಟ, ಕೆಡಕು, ಕಾಯಿಲೆ ಉಂಟಾಗುತ್ತದೆ ಎಂಬ ನಂಬಿಕೆಯಿದೆ. ನೀರಿಗೆ ಬಿಟ್ಟಾಗ, ಗೊಂಬೆಯ ಮೂಲಕ ಈ ಅನಿಷ್ಟಗಳು, ಕಾಯಿಲೆ ಇತ್ಯಾದಿ ದೂರವಾಗುತ್ತವೆ ಎಂದೂ ತಿಳಿಯುತ್ತಾರೆ. ಅಲ್ಲದೆ, ಈ ಹಬ್ಬದ ಮತ್ತೊಂದು ವಿಶೇಶವೆಂದರೆ, ಹಿರಿಯರು, ತಾಯಿ-ತಂದೆಯರು ತಮ ಹೆಣ್ಣುಮಕ್ಕಳ ಆರೋಗ್ಯ, ಆಯಸ್ಸು, ಇವುಗಳ ವೃದ್ಧಿಗಾಗಿ ಆಸಕ್ತಿಯಿಂದ `ಹಿನಾ ಮತ್ಸೂರಿ' ಹಬ್ಬವನ್ನು ಆಚರಿಸುತ್ತಾರೆ.

`ಹಿನಾ ಮತ್ಸೂರಿ' ಹಬ್ಬವು ಮಾರ್ಚ್‍ ತಿಂಗಳಲ್ಲಿ ಬರುವ ಕಾರಣದಿಂದ, ಈ ಹಬ್ಬವನ್ನು ತೃತೀಯ ತಿಂಗಳ ಹಬ್ಬ ಎಂದೂ ಕರೆಯುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ `ಸಂಖ್ಯೆ ಮೂರು' ವಿಶೇಷ ಮಹತ್ವದಿಂದ ಕೂಡಿದೆಯಂತೆ. ಹೀಗಾಗಿ `ಸಂಖ್ಯೆ ಮೂರು' - ಸ್ವರ್ಗ, ಭೂಮಿ ಮತ್ತು ಮಾನವ ಸಂಬಂಧಗಳ ಕಲ್ಪಿಸುತ್ತದೆ ಎಂದು ಹೇಳುತ್ತಾರೆ. ಹೀಗಾಗಿ, ಜಪಾನೀಯರಲ್ಲಿ ಈ ಹಬ್ಬವು ವಿಶೇಷ ಪ್ರಾಮುಖ್ಯತೆಯನ್ನು ಪಡೆದಿದೆ.

ಜಪಾನೀಯರ ಈ ಹಬ್ಬದ ಆಚರಣೆ, ನಂಬಿಕೆ ಇವುಗಳನ್ನು ನೋಡಿದರೆ ನಮ್ಮ ಭಾರತದೇಶದಲ್ಲಿ ಆಚರಿಸುವ ನವರಾತ್ರಿಯ ಹಬ್ಬವನ್ನು ನೆನಪಿಸುತ್ತದೆ. ಹಿಂದೂಗಳ ಕೆಲವು ಸಂಪ್ರದಾಯಗಳಲ್ಲಿರುವಂತೆ, ಜಪಾನೀಯರೂ ಸಹ ತಮ್ಮ ಹೆಣ್ಣು ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವಾಗ ಚಂದನದ ಗೊಂಬೆ ದಂಪತಿಗಳನ್ನು ನೀಡಿ ಹರಸುವ ವಾಡಿಕೆಯೂ ಕಂಡುಬರುತ್ತದೆ.

ಎಲ್ಲರಿಗೂ `ನವರಾತ್ರಿ ಹಬ್ಬದ ಶುಭಾಶಯಗಳು', ಮುಂಚಿತವಾಗಿ.

ಲೇಖನ (ಸಂಗ್ರಹ): ಚಂದ್ರಶೇಖರ ಬಿ.ಎಚ್.೧೬.೦೯.೨೦೦೯

10 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಚಂದ್ರು ಸರ್,
ಜಪಾನೀಯರ ಹಬ್ಬದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು, ನನಗೂ ಬಹಳಷ್ಟು ತಿಳಿಯಿತು
ಒಳ್ಳೆಯ ಬರಹ

rakesh holla ಹೇಳಿದರು...

Thanks for this information..
nice article..
Keep on publish...

ಅನಾಮಧೇಯ ಹೇಳಿದರು...

ಜಪಾನಿನ ಸಂಸ್ಕೃತಿಯ ಬಗ್ಗೆ ನೀವು ಮಾಡಿದ reasearch ಗೆ ಹ್ಯಾಟ್ಸ್ ಆಫ್!! ಪೂರ್ವಾತ್ಯ ದೇಶಗಳಿಗೆಲ್ಲ ಒಂದಲ್ಲ ಒಂದು connection ಇರುತ್ತೆ ಅನ್ನೋದು ಸತ್ಯ!! ಏನಂತೀರಾ??

AntharangadaMaathugalu ಹೇಳಿದರು...

ಚಂದ್ರು ಸಾರ್...
ಜಪಾನೀಯರ ವಿಶೇಷ ಹಬ್ಬದ ಮಾಹಿತಿ ಚೆನ್ನಾಗಿದೆ. ಹುಡುಕಿಕೊಂಡು ಹೋದರೆ, ಖಂಡಿತಾ ಸಾಮ್ಯತೆ ಇರತ್ತೆ ಅಲ್ವಾ?

ಶ್ಯಾಮಲ

shivu ಹೇಳಿದರು...

ಚಂದ್ರು ಸರ್,

ನಮ್ಮ ಬೊಂಬೆ ಹಬ್ಬಕ್ಕೂ ಜಪಾನಿಯರ ಹಬ್ಬಕ್ಕೂ ಎಷ್ಟು ಚೆನ್ನಾಗಿ ಲಿಂಕ್ ಮಾಡಿದ್ದೀರಿ....

ಜಪಾನಿನ ಹಬ್ಬದ ಬಗ್ಗೆ ಚೆನ್ನಾಗಿ ತಿಳಿವಳಿಕೆ ನೀಡಿದ್ದೀರಿ..ಮತ್ತು
ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ...ನೀವು ಹುಡುಕಿ ಕೊಟ್ಟ ಸಾಮ್ಯತೆಗೆ ಧನ್ಯವಾದಗಳು..

ಕ್ಷಣ... ಚಿಂತನೆ... bhchandru ಹೇಳಿದರು...

ಗುರುಮೂರ್ತಿ ಅವರೆ, ಎರಡು ವರ್ಷಗಳ ಹಿಂದೆ ಇದರ ಬಗ್ಗೆ ಬರೆಯಲು ಪ್ರಯತ್ನಿಸಿದ್ದೆ. ಆದರೆ, ಇದೀಗ ಇಲ್ಲಿ ಪೋಸ್ಟ ಮಾಡಲು ಸಾಧ್ಯವಾಗಿದ್ದು. ಲೇಖನ ನಿಮಗೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.

ಕ್ಷಣ... ಚಿಂತನೆ... bhchandru ಹೇಳಿದರು...

ರಾಕೇಶ್ ಹೊಳ್ಳ ಅವರೆ, ಬ್ಲಾಗಿಗೆ ಮೊದಲಬಾರಿ ಭೇಟಿ ಕೊಟ್ಟಿದ್ದೀರಿ ಮತ್ತು ಬರಹವನ್ನು ಮೆಚ್ಚಿ ಉತ್ತೇಜಿಸಿದ್ದೀರಿ. ಹೀಗೆಯೆ ಬರುತ್ತಿರಿ. ಥ್ಯಾಂಕ್ಸ್.

ಕ್ಷಣ... ಚಿಂತನೆ... bhchandru ಹೇಳಿದರು...

ಸುಮನಾ ಮೇಡಂ, ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು. ಹೌದು, ನಿಮ್ಮ ಮಾತು ನಿಜ ಎಂದಷ್ಟೇ ಹೇಳಬಲ್ಲೆ. ಹೀಗೆಯೇ ಬರುತ್ತಿರಿ.
ಚಂದ್ರಶೇಖರ ಬಿಎಚ್.

ಕ್ಷಣ... ಚಿಂತನೆ... bhchandru ಹೇಳಿದರು...

ಶ್ಯಾಮಲಾ ಅವರೆ, ಸಾಮ್ಯತೆ ಇದ್ದೇ ಇರುತ್ತದೆ. ಆದರೆ ನಮಗೆ ತಿಳಿದಿರುವುದಿಲ್ಲ. ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು.
ಚಂದ್ರು.

ಕ್ಷಣ... ಚಿಂತನೆ... bhchandru ಹೇಳಿದರು...

ಶಿವು ಅವರೆ, ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು. ಹೀಗೆಯೆ ಬರುತ್ತಿರಿ.
ಚಂದ್ರು.