ಮಂಗಳವಾರ, ಜುಲೈ 27, 2010

ನೆನಪಿನಲ್ಲಿ

ದಶಕಗಳಿಗೂ ಮೀರಿದ ಒಂದು ದಿನ. ಆ ದಿನಾಂಕ, ವರ್ಷ ನೆನಪಿಲ್ಲವಾದರೂ ಆಜುಬಾಜಿನ ವರ್ಷಗಳ ನೆನಪಿದೆ. ಸುಮಾರು ೧೯೯೦-೯೨ ಇರಬಹುದು. ಆಗೆಲ್ಲ ರಕ್ಷಾ ಬಂಧನವೆಂದರೆ, ಆರ್‌ಎಸ್‌ಎಸ್‌ನವರ ಪೆರೇಡಿನಲ್ಲಿ ಸ್ನೇಹಿತರು ಸಂಗ್ರಹಿಸಿ ತರುತ್ತಿದ್ದ ರಾಖಿದಾರಗಳು. ಹೀಗೆಯೇ ಆ ವರ್ಷವೂ ಸ್ನೇಹಿತರ ಮನೆಯಲ್ಲಿ ರಾಖಿಹಬ್ಬದ ಸಂಭ್ರಮ. ಆ ದಿನಗಳಲ್ಲಿ ನಾವುಗಳೇ ರೇಷ್ಮೆ ನೂಲಿನ ದಾರದಿಂದ ಕುಚ್ಚುಕಟ್ಟಿ ದಾರ ಸೇರಿಸಿ ರಾಖೀ ತಯಾರಿಸುತ್ತಿದ್ದೆವು (ನಾವುಗಳು ಆಗ ಅಂಗಡಿಗಳಿಂದ ಕೊಂಡು ತರುವುದು ಅಪರೂಪವಾಗಿತ್ತು).

ಅದೇ ದಿನ ನನ್ನ ಕೈಗೂ ರಕ್ಷಾ ಬಂಧನವಾಯಿತು ನನಗಿಂತ ೫-೬ ವರ್ಷ ಹಿರಿಯರೊಬ್ಬರಿಂದ. ಅಂದಿನಿಂದ ಮೊನ್ನೆಮೊನ್ನೆಯವರೆವಿಗೂ ಈ ಬಂಧ ಸೋದರ/ರಿ ಸಂಬಂಧ ಸಾಗುತ್ತಿತ್ತು. ಸಂಸ್ಕೃತ ತರಗತಿಗಳಲ್ಲಿ ಸಿಗುತ್ತಿದ್ದೆವು. ವಾರದಲ್ಲಿ ಹೀಗೆ ಒಂದಿಲ್ಲೊಂದು ಬಾರಿಯಾದರೂ ಈ ಅಕ್ಕ-ತಮ್ಮನ ಭೇಟಿ ತಪ್ಪುತ್ತಿರಲಿಲ್ಲ. ಆದರೆ. ಕೆಲವಾರು ವರ್ಷಗಳಿಂದ ಅದೇಕೋ ಕಾಣೆಯಾದರು (ಇದೇ ಊರಿನಲ್ಲಿದ್ದರೂ ಭೇಟಿಯಾಗದೇ ವರ್ಷಗಳೇ ಉರುಳಿದವು). ಇವರ ಮಧುರ ಮಂಜುಳಧ್ವನಿ ಮರೆಯಲುಂಟೆ???

ಹೀಗೇ ಮತ್ತೊಬ್ಬರು ಸಹಾ ದೂರಾದರು. ಅದಕ್ಕೆ ಅನ್ಯ ಕಾರಣಗಳಿದ್ದರೂ ಮಾತುಗಳಿಲ್ಲ. ಕೇವಲ ಮುಗುಳ್ನಗೆಯೊಂದೆ ಕುಶಲ ಕ್ಷೇಮವೆಲ್ಲವನ್ನೂ ಸೂಚಿಸುವಂತಹ ಒಂದು ಒಪ್ಪಂದವಾಯಿತು (??) ಎನ್ನಬಹುದು. ಹೌದು, ಇದು ಮಾತಿನಲ್ಲಿ ಹೇಳಲಾಗದ ಒಬ್ಬ ಸೋದರಿಯ ಕಥೆಯಾಯಿತು. ಆನಂತರ ಒಮ್ಮೆ ಮಾತ್ರ ಭೇಟಿಯಾಗಿದ್ದು. ಈಗೆಲ್ಲಿದ್ದಾರೆ ತಿಳಿಯದು. ಆದರೂ ಕೆಲವೊಮ್ಮೆ. ಅಪರಿಚಿತರಾಗಿ ಬಂದು ಚಿರಪರಿಚಿತರಾಗಿ ಹೋಗುವಾಗ ನೆನಪೊಂದೆ ಕಾಣಿಕೆ ಎಂಬಂತೆ... ಆಗುವುದು ಸಹಜ. ನಕ್ಕರೂ ಸಂತೋಷವೇ... ನುಡಿಯದಿದ್ದರೂ ಸುಖವಾಗಿರಲೆಂದು ಮನಬಯಸಿತ್ತು. ಏಕೆಂದರೆ, ಅವರು ರಾಖೀಸೋದರಿ... ಅವರ ಮಮತೆ ಮರೆಯಲುಂಟೆ.

ಏಕೆಂದರೆ, ಒಡಹುಟ್ಟಿದವರು ಮಾತ್ರವೇ ಅಣ್ಣ, ತಂಗಿ, ತಮ್ಮ, ಅಕ್ಕ ಹೀಗೆ ಆಗಬೇಕೆಂದೇನಿಲ್ಲ, ಅಲ್ಲವೇ?

ಆಕಸ್ಮಿಕವಾಗಿ ಎಂದೋ ಈ ಇಬ್ಬರು ಅಕ್ಕ ತಂಗಿಯ ನೆನಪಿನಲ್ಲಿ ಬರೆದಿದ್ದ ಸಾಲುಗಳು ಡೈರಿಯಲ್ಲಿಂದು ಸಿಕ್ಕಿತು. ಏಕೆಂದರೆ, ಅಂತಹ ಅಪರೂಪದವರು ಮತ್ತೆ ಸಿಗುವುದು ಎಂದೋ ತಿಳಿದವರಾರು??? ಅಲ್ಲದೇ ಇನ್ನೇನು ಮುಂದಿನ ತಿಂಗಳು ರಕ್ಷಾಬಂಧನ ಬರುತ್ತಿದೆ. ಆವಾಗ ಇವರು ಮತ್ತೆ ಸಿಗಬಹುದೇನೋ??

ದೊರಕಿತೆನೆಗೆ ನನ್ನ ಭಾಗ್ಯನಿಧಿ,
ಅಕ್ಕ ನಿನ್ನ ಪ್ರೀತಿ ರೂಪದಿ
ಮರೆಸಿತೆನ್ನ ಮನಸಿನಾ ದು:ಖ
ನಿನ್ನ ಮೃದು ಮಾತದು ಅಕ್ಕಾ.. ಅಕ್ಕಾ...

ಅಳಿಸಿ ಹೋದವು ಪರಿತಾಪಗಳು
ನಿನ್ನ ನಗುವ ಸದ್ದನಾಲಿಸಿ,,
ಉಳಿಯಿತೆನ್ನ ಹೃದಯದಲಿ
ನಿನ್ನ ಪ್ರೀತಿತುಂಬಿದಾ ನುಡಿಗಳು...

ಆದರೆ...

ಅದೊಂದು ದಿನ ನೀ ದೂರಾದೆ???
ಕಾರಣ ನಿನಗೆ ತಿಳಿಯದೇ?? ನೀ ಮಾತಾಡದಿದ್ದರೂ
ಪರವಾಗಿಲ್ಲ,
ಎಲ್ಲಿದ್ದರೂ ಸದಾ ನಗುತಿರು... ನಿರಂತರ
ಸುಖವಾಗಿರು, ಖುಷಿಯಾಗಿರು, ಓ ನನ್ನ ಭಗಿನಿ...


chandrashekara b.h.
-------------------------------
"To go anywhere, begin by taking a first step." -Caine

10 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಹೌದು ಸಹೋದರತ್ವದಲ್ಲಿ ವಿಶೇಷವಾದ ಬ೦ಧವಿರುತ್ತದೆ. ಮನಸಿನಲ್ಲಿ ಅದು ಬಹುಕಾಲ ನೆಲೆ ನಿ೦ತಿರುತ್ತದೆ. ಆದರೇನು ಮಾಡುವುದು ಅಗಲಿಕೆ ಸಹಜ, ಜೀವನ ಹರಿಯುವ ನದಿ ಇದ್ದಂತೆ. ಯಾರೂ ಜೀವನದ ಕೊನೆ ತನಕ ನಮ್ಮ ಜೊತೆ ಜೊತೆ ಇರುತ್ತಾರೆ೦ಬ ಖಾತ್ರಿಯಿಲ್ಲ, ಅವರವರದೇ ಆದ ಕಾರಣಗಳಿರುತ್ತವೆ. ಈ ಚಲನಶೀಲತೆ ಬದುಕಿನ ಬಹುಮುಖ್ಯ ಅ೦ಶ, ಅಲ್ಲವೇ. ರಾಖಿ ಹಬ್ಬದ ಮು೦ಬೆಳಕಿನಲ್ಲಿ ನಿಮ್ಮ ಲೇಖನ, ಕೊನೆಯ ಕವನ ಎಲ್ಲವೂ ಚೆನ್ನಾಗಿವೆ.

shridhar ಹೇಳಿದರು...

ಚಂದ್ರು ಸರ್ ,
ಜೀವನದ ಹಾದಿಯಲ್ಲಿ ಇಂತಹ ಏಷ್ಟೋ ರಾಖಿಸಹೋದರಿಯರಾಗುತ್ತಾರೆ. ಕೆಲವೊಬ್ಬರು ಸಿಗೂತ್ತಿದ್ದರೂ ,ಎಷ್ಟೊ ಜನ
ನೆನಪಿನಾಳದಲ್ಲಿ ಇಳಿದು ಹೋಗುತ್ತರೆ .. ಆದರೆ ಮನದಿಂದ ಅಳಿಯುವುದಿಲ್ಲ .. ಮನಸು ಬಯಸುವುದೊಂದೆ
ಎಲ್ಲೆ ಇರು , ಹೇಗೆ ಇರು .. ಎಂದೆಂದೂ ನೀ ಸುಖವಾಗಿರು :)

ರಾಖಿ ಹಬ್ಬದ ಪೂರ್ವಕ್ಕೆ ಬಂದ ನಿಮ್ಮ ಲೇಖನ ತುಂಬ ನೆನೆಪುಗಳ ಸರಮಾಲೆಯನ್ನೇ ತಂದಿತು.

ಸೀತಾರಾಮ. ಕೆ. / SITARAM.K ಹೇಳಿದರು...

ಚೆಂದದ ಕವನ.ರಾಖೀ ಹಬ್ಬದ ಆಚರಣೆಯ ಹಿನ್ನಲೆಯಲ್ಲಿ ಅಣ್ಣ ತಂಗಿ, ಅಕ್ಕ -ತಾಮ್ಮರ ಭಂಧ ಚೆನ್ನಾಗಿ ಹೇಳಿ ತಮ್ಮ ನೆನಪನ್ನು ಹಂಚಿದ್ದಿರಾ... ಕೊಳಚಿದ ಕಂಡಿಗಳು ಮತ್ತೆ ಕೂಡಲಿ...
ಧನ್ಯವಾದಗಳು.

ಮನಮುಕ್ತಾ ಹೇಳಿದರು...

ನಿಜ..ಮಮತೆ, ವಾತ್ಸಲ್ಯದ ಭಾವಗಳನ್ನು ಮರೆಯಲು ಅಸಾಧ್ಯ.. ಸಹೋದರತೆಯ ಅಮೂಲ್ಯ ಭಾವನೆಯಲ್ಲಿ ಬರೆದ ನಿಮ್ಮ ಬರಹ ಮನವನ್ನು ತಟ್ಟಿತು.ದೂರಾದ ಮನ ಹತ್ತಿರವಾಗಲಿ.

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ ಹೇಳಿದರು...

ಜೀವನದ ದಾರಿಯಲ್ಲಿ ಈಗೇ ಎಲ್ಲರಿಗೂ ಆಗುತ್ತೆ "ಎಲ್ಲಿದ್ದರೂ ಸದಾ ನಗುತಿರು... ನಿರಂತರ
ಸುಖವಾಗಿರು, ಖುಷಿಯಾಗಿರು, ಓ ನನ್ನ ಭಗಿನಿ"..ನಿಮ್ಮ ಈ ಹಾರೈಕೆ ಪ್ರೀತಿ ನಿಮ್ಮ ಮತ್ತೆ ಒಂದಾಗಿಸುತ್ತೆ ಅನ್ನೋ ಭಾವನೆ ನನ್ನದು :)

AntharangadaMaathugalu ಹೇಳಿದರು...

ಎಲ್ಲಿದ್ದರೂ ಸುಖವಾಗಿರು ಎಂದು ಹಾರೈಸುವ ನಿಮ್ಮ ಒಳ್ಳೆಯ ಮನಸ್ಸಿಗೆ ನನ್ನ ಅಭಿಮಾನ ತುಂಬಿದ ಧನ್ಯವಾದಗಳು... ಬದುಕೆಂಬ ಪಯಣದಲಿ ಹೀಗೆ ಆಗುವುದು ಬಹಳ ಸಹಜ... ಆದರೆ ಮನಸ್ಸಿನಲ್ಲೇ ನೆಲೆ ನಿಂತಿರುವ ಪ್ರೀತಿ, ನೆನಪುಗಳನ್ನು ನಾವು ಜೋಪಾನವಾಗಿ ಬಚ್ಚಿಟ್ಟುಕೊಳ್ಳಬೇಕು... ಅಕ್ಕ ತಂಗಿ, ಅಣ್ಣ ತಮ್ಮನಾಗಲು ಒಡಹುಟ್ಟಿದವರೇ ಆಗಬೇಕೆಂದಿಲ್ಲ ಎಂಬ ನಿಮ್ಮ ಮಾತು ಖಂಡಿತಾ ಸತ್ಯ... ಚೆನ್ನಾಗಿದೆ ಚಂದ್ರೂ.... ನಿಮ್ಮ ಮನದಾಳದ ಮಾತುಗಳು...

ಶ್ಯಾಮಲ

ಅನಂತ್ ರಾಜ್ ಹೇಳಿದರು...

ಬದುಕು ಆಕಸ್ಮಿಕವಲ್ಲ ಆರಿಸಿಕೊ೦ಡು ಬ೦ದದ್ದು. ಹಾಗೇ ಸ೦ಬ೦ಧಗಳೂ ಕೂಡ. ಕೆಲವೊಮ್ಮೆ ಸ೦ಬ೦ಧಗಳು ದೀಘ೯ವಾಗಿದ್ದರೆ ಮತ್ತೊಮ್ಮೆ ಹ್ರಸ್ವ ವಾಗುತ್ತವೆ. ಆದರೆ ಎಲ್ಲಿದ್ದರೂ ನಗುತಿರು, ಸುಖವಾಗಿರು ಎಂದು ಹಾರೈಸುವ ನಿಮ್ಮ ಮನೋಭಾವನೆಯನ್ನು ನಾನು ಗೌರವಿಸುತ್ತೇನೆ.. ಚ೦ದ್ರು ಸರ್.

ಶುಭಾಶಯಗಳು
ಅನ೦ತ್

ದಿನಕರ ಮೊಗೇರ ಹೇಳಿದರು...

ಚಂದ್ರು ಸರ್,
ಅಕ್ಕ ತಂಗಿಯರ ಸಂಭಂದಕ್ಕೆ ಸಾಟಿಯೇ ಇಲ್ಲ ..... ಅದು ಒಡ ಹುಟ್ಟಿದವರೇ ಆಗಿರಬಹುದು.... ರಾಖಿ ಕಟ್ಟಿದವರೇ ಇರಬಹುದು..... ರಾಖಿಗೆ ಬೆಲೆ ಕೊಡದವನು ಯಾವುದಕ್ಕೂ ಅರ್ಹನಲ್ಲ ಎಂದು ನನ್ನ ಅನಿಸಿಕೆ,..... ನಿಮಗೆ ನಿಮ್ಮ ಸೋದರಿಯರು ಸಿಗಲಿ..... ತುಂಬಾ ಚೆನ್ನಾಗಿದೆ ಸರ್.....

ನನ್ನ ಬ್ಲಾಗಿ ಗೂ ಬನ್ನಿ ಸರ್...

shivu.k ಹೇಳಿದರು...

ಚಂದ್ರು ಸರ್,

ಪ್ರತಿಯೊಬ್ಬರ ಜೀವನದಲ್ಲೂ ಅನೇಕ ಸಹೋದರ ಸಹೋದರಿಯರು ಬಂದುಹೋಗುತ್ತಿರುತ್ತಾರೆ. ಆದ್ರೆ ನೆನಪುಗಳು ಮಾತ್ರ ಮರೆಯಲಾಗದಂಥವು. ಕವನ ಚೆನ್ನಾಗಿದೆ. ರಾಖಿ ಹಬ್ಬವನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಈ ನನ್ನ ಮನದಾಳದ ನೋವಿಗೆ ಸ್ಪಂದಿಸಿ, ಆಶಾಭಾವನೆ ಮೂಡಿಸಿರುವ ತಮ್ಮೆಲ್ಲರಿಗೂ ಹಾಗೂ ಮೊದಲಬಾರಿಗೆ ಭೇಟಿಕೊಟ್ಟು ಅಭಿನಂದಿಸಿದ ಎಲ್ಲರಿಗೂ ಧನ್ಯವಾದಗಳು.

ಸ್ನೇಹದಿಂದ,