ಎರಡು ದಿನಗಳು ನಡುವೆ ಇಂದಿನ ದಿನ ಬಾಳೋಣ
ವಾರದಲ್ಲಿ ಎರಡು ದಿನ. ಎರಡೇ ಎರಡು ದಿನಗಳು ನಾವು ಯಾವುದೇ ಯೋಚನೆ, ಚಿಂತೆ, ಗಾಬರಿ ಇವುಗಳಿಂದ ಇರಬಹುದಾದುದು ಕೇವಲ ಎರಡು ದಿನಗಳು. ಈ ಎರಡು ದಿನಗಳಲ್ಲಿ ಮೊದಲನೆಯದು ನಿನ್ನೆ ಎಂಬುದು. ಈ ದಿನದಲ್ಲಿ ನಡೆದಿರಬಹುದಾದ ತಪ್ಪು ಒಪ್ಪುಗಳು, ಪರರ ದೂಷಿಸಿದ್ದು, ಕಾಲ ಕಳೆದದ್ದು, ಪರರಿಗೆ ನೋವುಂಟು ಮಾಡಿದ್ದು ಅಥವಾ ಬೇರೆಯವರಿಂದ ನಮಗೆ ನೋವು, ನಲಿವು ಉಂಟಾಗಿದ್ದು ಇವೆಲ್ಲ ನಿನ್ನೆ ಎಂಬ ಕಳೆದು ಹೋದ ಒಂದು ದಿನ. ಅದು ಯಾರನ್ನೂ ಕಾಯದೇ ಎಲ್ಲರನ್ನೂ, ಎಲ್ಲವನ್ನೂ ಸವರಿಕೊಂಡು ಹೋದ ದಿನ. ಅದಕ್ಕೆ ನಾವೆಷ್ಟೇ ಹಣ, ಆಮಿಷ, ಆಸೆ ಆಕಾಂಕ್ಷೆಗಳನ್ನು ಕೊಟ್ಟರೂ, ಅದು ಹಿಂದಿರುಗಿ ಬರಲಾರದ ದಿನ. ಆ ದಿನವು ನಾವೆಲ್ಲ ಮಾಡಿರಬಹುದಾದ ನುಡಿದಿರಬಹುದಾದ, ನಡೆದಿರಬಹುದಾದ ಒಳ್ಳೆಯದು, ಕೆಟ್ಟದ್ದು, ಎಲ್ಲವನ್ನೂ ತನ್ನ ಅಂತರಂಗದಲ್ಲಿ ಅಡಗಿಸಿಕೊಂಡು ನೆನಪನ್ನು ಮಾತ್ರವೇ ಬಿತ್ತಿ ಮರೆಯಾದ ದಿನ. ನಿನ್ನೆಯ ದಿನ ಎಂಬುದು. ಅದು ಕಳೆದು ಹೋದ ನಿನ್ನೆಯ ದಿನವಷ್ಟೇ ಆಗಿರುತ್ತದೆ ಮತ್ತು ಆಗಿದೆ.
ಇನ್ನು ಎರಡನೆಯದು ನಾಳೆ ಎಂಬುದು. ಇದರ ಬಗ್ಗೆಯೂ ಚಿಂತಿಸಿ, ಯೋಚಿಸಿ ಕೊರಗ ಬೇಕಿಲ್ಲ. ಕಾರಣ, ಅದು ಇನ್ನೂ ಬರಬೇಕಾದ ದಿನ. ಈ ದಿನದಲ್ಲಿ ನಾವು ಮಾಡಬಹುದಾದ ಕೆಲಸಗಳು, ಚಟುವಟಿಕೆ, ಗಾನ, ನೋವು, ನಲಿವು, ಇವೆಲ್ಲ ನಮ್ಮ ಕೈಯೊಳಗಿರುವುದಿಲ್ಲ. ಏಕೆಂದರೆ ನಾಳೆ ಎಂಬುದು ಇನ್ನೂ ಅಸ್ಪಷ್ಟ ದಿನ. ಈ ನಾಳೆಯ ದಿನ ಎಂದಿನಂತೆ ಸೂರ್ಯ ಹೊಂಗಿರಣಗಳ ರಾಶಿಯೊಂದಿಗೆ ಉದಯಿಸಬಹುದು ಅಥವಾ ಮೋಡಗಳ ಹಿಂದಿನಿಂದ ಉದಯಿಸಲೂ ಬಹುದು. ಆದರೆ ಸೂರ್ಯನ ಉದಯವಾಗುತ್ತದೆ. ಅದು ಪ್ರಕೃತಿಯ ವಿಚಾರ. ಆದರೆ, ಮಾನವನಿಗೆ ನಾಳೆ ಎಂಬುದು ಇನ್ನೂ ನಾಳೆಯೇ! ಏಕೆಂದರೆ, ನಾವಿನ್ನೂ ಈ ವರ್ತಮಾನದಿನದಲ್ಲಿರುವಾಗ ನಾಳೆ ಎಂಬುದು ಇನ್ನೂ ಹುಟ್ಟಿರುವುದಿಲ್ಲ. ಇದು ಕೇವಲ ಒಂದು ದಿನವನ್ನು ಮಾತ್ರವೇ ಬಿಟ್ಟಿರುತ್ತದೆ. ಯಾವುದೇ ವ್ಯಕ್ತಿಯು ಒಂದು ದಿನಕ್ಕಾಗಿ ಹೋರಾಡಲೇ ಬೇಕು. ಅದು ನಿನ್ನೆ ಮತ್ತು ನಾಳೆಯ ನಡುವೆ ಇರುವ `ಇಂದಿನ ದಿನ' ಕ್ಕಾಗಿ. ಮಾನವನಲ್ಲಿ ಎಲ್ಲ ರೀತಿಯ ಕುಹಕತನ, ಹುಂಬತನ, ಅನ್ಯಾಯ, ದುರಾಸೆ, ವಂಚನೆ, ಕ್ರೌರ್ಯ ಇವಕ್ಕೆಲ್ಲ ಕಾರಣೀಭೂತವಾಗುತ್ತಿರುವುದು ಅಥವಾ ಕಾರಣವಾಗುವುದು `ಇಂದಿನ ದಿನ' ವಿಚಾರವಾಗಿಯಲ್ಲ; ಬದಲಾಗಿ ಕಳೆದು ಹೋದ ಮತ್ತು ಬರಬಹುದಾದ ಲಾಭ-ನಷ್ಟಗಳ ಎಣಿಕೆಯಲ್ಲಿ ಅಂದರೆ, ನಿನ್ನೆ ಮತ್ತು ನಾಳೆ ಎಂಬ ಎರಡು ದಿನಗಳ ಮೂಲಕ. ಬದುಕನ್ನು ಇಂದಿನ ದಿನವನ್ನಾಗಿ ಬಾಳೋಣ - ನಿನ್ನೆ ಮತ್ತು ನಾಳೆಗಳ ನಡುವೆ ಇರುವ `ಇಂದಿನ ದಿನ'ದಲ್ಲಿ ಸಂತಸದಿಂದಿರೋಣ.
ಚಂದ್ರಶೇಖರ ಬಿ.ಎಚ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ