ಶನಿವಾರ, ಸೆಪ್ಟೆಂಬರ್ 5, 2009

ಶಿಕ್ಷಕರ ದಿನಾಚರಣೆ - ಅರ್ಪಣ

ಯಾರು, ಈ ಕಂದ?
ಮುಂಜಾನೆ ಮೈದಾನದಲಿ ಆ ದಿನ
ಆಟದಲಿ ಮುಳುಗಿದ್ದ ಮಗುವಾಗಿದ್ದೆ
ನನ್ನೆಡೆಗೆ ಬಂದವರು ಕೇಳಿದರು,
"ಈ ಕಂದ ಯಾರದೆಂದು"? ಕ್ಷಣದಲ್ಲೇ ಉತ್ತರಿಸೆ
ನನ್ನದೇ, ನಾನಿವನ ತಾಯಿ. ಶುಚಿಗೊಳಿಸಿ ಕೈಬಾಯಿ
ಈತನ ಕಳಿಸುವೆನು ಶಾಲೆಗೆ ಇದೀಗ ಎಂದು

ಮಧ್ಯಾಹ್ನ ಮತ್ತದೇ ಮಗುವ ಕಂಡವರು
ಓದು ಬರಹದಲಿ ಮುಳುಗಿದ್ದ ಮಗುವಾಗಿದ್ದೆ
ನನ್ನೆಡೆಗೆ ಬಂದವರು ಕೇಳಿದರು,
"ಈ ಕಂದ ಯಾರದೆಂದು"? ಕ್ಷಣದಲ್ಲೇ ಧ್ವನಿಯೊಂದು
ನನ್ನದೇ, ನಾನಿವನ ವಿದ್ಯಾದಾತೆ. ಓದು ಬರಹ, ನೀತಿ
ಪಾಠ, ಕಲಿಸುವೆನು ಒಳ್ಳೆಯ ನಡತೆಯ ಎಂದೆಂದೂ

ಸಂಜೆಯಲಿ ಮತ್ತದೇ ಮಗುವ ಕಂಡವರು
ಕೇಳಿದರು, "ಈ ಕಂದ ಯಾರದೆಂದು"? ಕ್ಷಣದಲ್ಲೇ
ಒಟ್ಟಾದ ಧ್ವನಿಯೆರಡು ನುಡಿದವು, ಈ ಕಂದ
ನಮ್ಮದೆಂದು. ನಾನಿವನ ತಾಯಿ, ಇವ ನನ್ನ ಕಣ್ಣು,
ನಾನಿವನ ಗುರುವು, ಇವ ನಮ್ಮ ಮಗುವು ಎಂದು.
ಹರುಷದಲಿ ಹಾರೈಸಿದರು, ನೂರ್ಕಾಲ ಬಾಳು ಎಂದು.

ಸೆಪ್ಟೆಂಬರ ೫, ಭಾರತೀಯರೆಲ್ಲರ ಮನಗೆದ್ದ ಶಿಕ್ಷಕ, ಚಿಂತಕ ಮತ್ತು ರಾಷ್ಟ್ರಪತಿಯಾಗಿದ್ದಂತಹ ಡಾ. ಎಸ್. ರಾಧಾಕೃಷ್ಣನ್‌ರವರ ಜನ್ಮದಿನ. ಈ ದಿನವನ್ನು ಶಿಕ್ಷಕರ ದಿನನವೆಂದು ಆಚರಿಸುತ್ತಾರೆ. ಅದೊಂದು ದಿನ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿದು ಸುಮಾರು ವರ್ಷಗಳ ನಂತರ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಮನೆಯ ವಿಳಾಸ ನೀಡಿದ್ದರು. ಒಂದು ದಿನ ಅವರ ಮನೆಗೆ ೩-೪ ಸಹಪಾಠಿ ಮಿತ್ರರು ಹೋಗಿದ್ದೆವು. ಆಗ ನಡೆದ ಒಂದು ಪ್ರಸಂಗವು ಮತ್ತು ಮೊನ್ನೆ ಗೂಗಲ್ಲಿನಲ್ಲಿ ಕವಿತೆಯೊಂದನ್ನು ಹುಡುಕುತ್ತಿದ್ದಾಗ ಕಂಡ ಅನಾಮಿಕ ಕವಿಯ ಆಂಗ್ಲ ಕವಿತೆಯು ಸಾಂದರ್ಭಿಕವಾಗಿ ಹೊಂದುವಂತಿದ್ದವು. ಮತ್ತು ಶಿಕ್ಷಕರ ದಿನಾಚರಣೆಯಯ ಈ ಒಂದು ಸಮಯದಲ್ಲಿ ಮೇಲಿನ ಕವಿತೆಯನ್ನು ಬರೆಯಲು ಪ್ರೇರೇಪಿಸಿತು. ಇದನ್ನು ಶ್ರೀರಾಜರಾಜೇಶ್ವರಿ ವಿದ್ಯಾ ಮಂದಿರ, ಶ್ರೀನಿವಾಸನಗರ, ಬೆಂಗಳೂರು 50 ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕಿ(ಕ)ರಾಗಿದ್ದವರೆಲ್ಲರಿಗೂ ಅರ್ಪಿಸುತ್ತೇನೆ.

ಚಂದ್ರಶೇಖರ ಬಿ.ಎಚ್.
ಐ.ಎಸ್.ಇ.ಸಿ.
ದಿ: ೦೫.೦೯.೨೦೦೯

4 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಕ್ಷಣ ಚಿಂತನೆ,
ಸುಂದರ ಕವಿತೆ, ಸಮಯೋಚಿತವಾದದ್ದು ಕೂಡಾ,
ನಮ್ಮನ್ನು ತಿದ್ದಿ ಬೆಳೆಸುವ ಶ್ರೇಷ್ಠ ಶಿಕ್ಷಕಿ ತಾಯಿ, ನಂತರ ನಮ್ಮನ್ನು ಸಮಾಜಕ್ಕೆ ಒಪ್ಪುವಂತೆ ಮಾಡುವ ಗುರು ಅವರೆಲ್ಲರಿಗೂ ಇ ಸಂಧರ್ಭದಲ್ಲಿ ಅಭಿನಂದಿಸಲೇಬೇಕು ಅಲ್ಲವೇ?

shivu.k ಹೇಳಿದರು...

ಕ್ಷಣ ಚಿಂತನೆ ಸರ್,

ಶಿಕ್ಷಕರ ದಿನಾಚರಣೆಗೆ ಸೊಗಸಾದ ಕವಿತೆ ಬರೆದಿದ್ದೀರಿ.

ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಗುರುಮೂರ್ತಿ ಸರ್‍, ಇವರುಗಳನ್ನು ದಿನವೂ ನೆನಪಿಸಿಕೊಳ್ಳುತ್ತಿರಬೇಕು. ಅದರಲ್ಲಿಯೂ ನಮಗೆ ಅ, ಆ ಇಂದ ಕಲಿಸಿಕೊಟ್ಟವರನ್ನು ಮರೆಯಲೇ ಬಾರದು. ಏಕೆಂದರೆ, ಓದು-ಬರಹವನ್ನು ಅವರು ಎಷ್ಟು ಕಷ್ಟಪಟ್ಟು ಕಲಿಸಿರುತ್ತಾರೆ. ಇಲ್ಲದಿದ್ದರೆ, ನಾವುಗಳು ಇಂದು ಈ ಬದುಕಿನಲ್ಲಿ ಹೀಗೆಲ್ಲಾ ಇರುತ್ತಿದ್ದೆವಾ? ಎನಿಸುತ್ತದೆ. ಕವನ ಇಷ್ಟವಾಗಿದ್ದಕ್ಕೆ ವಂದನೆಗಳು.

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍, ಕವನ ನಿಮಗೆ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ಈ ಕವನವನ್ನು ೨ ವರ್ಷಗಳ ಹಿಂದೆ ಬರೆದಿದ್ದೆ. ಧನ್ಯವಾದಗಳು.