ಗುರುವಾರ, ಡಿಸೆಂಬರ್ 9, 2010

ಬಂಟಿ,.. ಬಂಟಿ,... ಬಂಟಿಂಗ್ಸ್.... ಬೇಕೆ?

ಬಂಟಿ,.. ಬಂಟಿ,... ಬಂಟಿಂಗ್ಸ್.... ಬೇಕೆ?

ಇಲ್ಲೊಬ್ಬ ಹುಡುಗನ ಭಾವಚಿತ್ರದ ಫ್ಲೆಕ್ಸ್‌ಗಳನ್ನು ದೀಪದ ಕಂಬಗಳಿಗೆ, ರಸ್ತೆಯ ಮಧ್ಯೆಯಲ್ಲಿರುವ ವೃತ್ತದಲ್ಲಿ ಕಟ್ಟಲಾಗಿದೆ. ಏನೆಂದು ಓದಿದರೆ, ಆತನ ಹೆಸರು, ಜನ್ಮ ದಿನಾಂಕ, ಮರಣ ದಿನಾಂಕ ಎಲ್ಲ ನಮೂದಿಸಿದ್ದಾರೆ.

ಮತ್ತೊಂದು ಭಾವಚಿತ್ರ ಕಾಣಿಸಿತು. ಅದರಲ್ಲಿ ಒಬ್ಬ ಯುವಕ. ಹಸನ್ಮುಖಿಯ ಚಿತ್ರ. ಆದರೆ, ಅದರಲ್ಲಿಯೂ ಹೆಸರು, ದಿನಾಂಕ ಇತ್ಯಾದಿ.

ಇನ್ನೊಂದರಲ್ಲಿ ಒಬ್ಬ ಅಜ್ಜನದು, ಮತ್ತೊಂದರಲ್ಲಿ ಅಜ್ಜಿಯದು, ಹೀಗೆ ಅಲ್ಲಲ್ಲಿ ಮಡಿದವರ ಭಾವಚಿತ್ರಗಳನ್ನು ದೊಡ್ಡದಾಗಿ ಬ್ಯಾನರ್‌ ಅಥವಾ ಮುದ್ರಿಸಿ ನೇತು ಹಾಕಿರುತ್ತಾರೆ. ಇದರಿಂದ ಮಡಿದವರ ಆತ್ಮಕ್ಕೆ ಶಾಂತಿ ಸಿಗಲೆಂದೋ ಅಥವಾ ಅವರೆಲ್ಲ ಏನಾದರೂ ಸಾಧನೆ ಮಾಡಿದ್ದರೆಂದೋ, ಸಾಧನೆ ಮಾಡುವ ಯಾದಿಯಲ್ಲಿದ್ದರೆಂದೋ ಒಂದೂ ತಿಳಿಯದು.

ಹೀಗೆ ನಿನ್ನೆ ದಿನ ನೋಡಿದೆ ಟಿ. ಆರ್‍ ಮಿಲ್ಲಿನ ಬಸ್‌ ನಿಲ್ದಾಣದ ಬಳಿಯಲ್ಲಿ ಒಬ್ಬ ಅಜ್ಜಿಯದು. ತರಕಾರಿ ಮಾರುವ ಒಬ್ಬ ಅಜ್ಜಿಯದು. ಅದರಲ್ಲಿಯೂ ಸತ್ತವರ ಚಿತ್ರಗಳನ್ನು ತಮ್ಮ ಮನೆ ಬೀದಿಗೆ ಹಾಕಿಕೊಳ್ಳಲಿ ತಪ್ಪೇನಿಲ್ಲ. ಅದನ್ನೆಲ್ಲ ಇಡೀ ಒಂದು ಏರಿಯಾ ವ್ಯಾಪ್ತಿಗೇ ಹಾಕುವ ಪರಿಪಾಠವೂ ಇದೆಯಲ್ಲ, ಅದಂತೂ ಮತ್ತೂ ಬೇಸರ/ವಾಕರಿಕೆ ತರಿಸುತ್ತದೆ.

ಇತ್ತೀಚೆಗಂತೂ ಇಂತಹ ಸಂಸ್ಕೃತಿ ನಗರ, ಪಟ್ಟಣಗಳೆನ್ನದೆ ಸಣ್ಣ ಸಣ್ಣ ಹಳ್ಳಿಗಳಲ್ಲೂ ವ್ಯಾಪಿಸುತ್ತಿದೆ. ಅವರವರಿಗೆ ಅವರವರ ವ್ಯಕ್ತಿ, ವಸ್ತುಗಳು ಮುಖ್ಯವಿರುತ್ತದೆ. ಒಪ್ಪಿಕೊಳ್ಳೋಣ. ಅದನ್ನೇ ಒಂದು ವಿಧದ ಸಾಮೂಹಿಕ ಕಲ್ಪನೆಯಲ್ಲಿ ಬೀದಿ ಬೀದಿಗೆ ಹೀಗೆ ನೇತು ಹಾಕುತ್ತಾ ಹೋದರೆ ಹೇಗೆ?

ಮೊದಲೇ ಹಬ್ಬಗಳಿಗೆಂದೋ, ಹೊಸ ಪಕ್ಷದ ಅಭ್ಯರ್ಥಿಗೆಂದೋ, ಶಾಸಕರ, ಸಚಿವರ ಹೀಗೆ ರಾಜಕಾರಣಿಗಳ ಹುಟ್ಟುಹಬ್ಬ, ಯಾವುದೋ ಯೋಜನೆಯ ಉದ್ಘಾಟನಾ ಸಮಾರಂಭ ಇತ್ಯಾದಿಗೆಳೆಂದು ಅದರಲ್ಲಿಯೂ ನಾಡ ಅಥವಾ ರಾಷ್ಟ್ರೀಯ ಹಬ್ಬಗಳಿಗೆ ಮುನ್ನಾ ದಿನ ಅಥವಾ ತಿಂಗಳ ಮುಂಚೆಯೇ ಈ ಫ್ಲೆಕ್ಸ್ ಬಂಟಿಂಗ್ಸ್, ಬ್ಯಾನರ್‍ಸ್ ರಸ್ತೆಯಲ್ಲಿನ ಪ್ರತಿಯೊಂದು ಕಂಬಗಳ ಮೇಲೆಯೋ, ರಸ್ತೆ ವಿಭಜಕಗಳ ನಡುವಿರುವ ಸ್ಥಳದಲ್ಲಿಯೋ, ರಸ್ತೆ ತಿರುವಿನಲ್ಲಿಯೋ ಹೀಗೆ ಜಾಗ ಕಂಡಲೆಲ್ಲ ರಾರಾಜಿಸುತ್ತಿರುತ್ತವೆ. ಇವೆಲ್ಲ ಇರಲಿ. ಅದರೊಡನೆ ಅ ಏರಿಯಾದ, ಸಂಘದ, ವರಿಷ್ಠ(?) ರ ಚಿತ್ರಗಳನ್ನೆಲ್ಲಾ ತುಂಬಿರುತ್ತಾರೆ. ಇದು ಯಾವ ಕರ್ಮ? ಯಾರಿಗೆ ಯಾರೋ ಶುಭಾಶಯ ಕೋರಲು ಹೀಗೆಲ್ಲ ವಿಪರೀತ ದೃಶ್ಯ ಮಾಲಿನ್ಯ ಮಾಡಬೇಕೆ?

ಮೊನ್ನೆ ಬಸ್ಸಿನಲ್ಲಿ ಬರುವಾಗ ಇದ್ದ ಒಂದು ಸ್ಟಿಕರಿನಲ್ಲಿ ಕನ್ನಡ ನಾಡಿನ ಜ್ಞಾನಪೀಠ ವಿಜೇತರ (ಇವು ಚಿಕ್ಕದಾಗಿವೆ) ಆ ಚಿತ್ರದೊಂದಿಗೆ ಕನ್ನಡ, ಹೆಮ್ಮೆ ಇತ್ಯಾದಿ ಬರಹದೊಂದಿಗೆ ಮಂತ್ರಿಮಹೋದಯರ ದೊಡ್ಡ ಚಿತ್ರವಿದೆ. ಇಲ್ಲಿ ಇವರು ಯಾರನ್ನು, ಯಾವುದನ್ನು ಬಿಂಬಿಸಲು ಹೀಗೆ ಮಾಡಿದ್ದಾರೆ ಅರ್ಥಮಾಡಿಕೊಳ್ಳಬೇಕು. ಕನ್ನಡ ನಾಡನ್ನೋ, ಜ್ಞಾನಪೀಠಿಗಳನ್ನೋ ಅಥವಾ ತಮ್ಮನ್ನೋ????

ಇವೆಲ್ಲ ಒಂದು ವಿಧದ ಜಾಹಿರಾತು ಪ್ರಕ್ರಿಯೆಗಳಾದರೆ, ಮತ್ತೊಂದು ಸಿನಿಮಾ ಪೋಸ್ಟರ್‌ಗಳು. ಬಿಸಿಲೆ ಚಿತ್ರದ ಪೋಸ್ಟರ ನೋಡಿದರೆ ಸಾಕು ನಮ್ಮ ಕಲಾವಿದರು (??) ಯಾವ ಮಟ್ಟ ತಲುಪಿದ್ದಾರೆ ಎನಿಸುತ್ತದೆ.

ಬ್ಯಾನರ್‌ ಸಂಸ್ಕೃತಿಯು ಇರಲಿ ಬೇಡವೆನ್ನುವುದಿಲ್ಲ. ಆದರೆ, ಅದು ಅತಿಯಾಗಿ ನಗರ, ಪಟ್ಟಣ, ಹಳ್ಳಿ, ಕುಗ್ರಾಮವೆನ್ನದೇ ಬೃಹದಾಕಾರವಾಗಿ ಬೆಳೆಯುತ್ತಿದೆ. ಇದರಿಂದ ದೃಶ್ಯಮಾಲಿನ್ಯವಲ್ಲದೇ ಅಪಾಯಗಳೂ ಇವೆ. ಹೇಗೆಂದರೆ, ದೊಡ್ಡ ದೊಡ್ಡ ಬ್ಯಾನರಗಳನ್ನು ರಸ್ತೆಯ ಬದಿಯಲ್ಲಿ ಕಟ್ಟುವಾಗ ಬೊಂಬಿನ ಸಹಾಯದಿಂದ ಕಟೌಟಿನಂತೆ ಕಟ್ಟಿರುತ್ತಾರೆ. ಅದೂ ೩-೪ ಆಳೆತ್ತರದವುಗಳು. ಮಳೆಯೋ, ಗಾಳಿಯೋ ಬೀಸಿ ಜನರು / ವಾಹನಗಳ ಮೇಲೆ ಬೀಳಬಹುದು. ಇಲ್ಲವೇ, ರಸ್ತೆಯಬದಿಯಲ್ಲಿನ ತಿರುವುಗಳಲ್ಲಿ ವಾಹನಗಳ ಅಪಘಾತವಾಗಬಹುದು. ಕೆಲವರಿಗೆ ಅದೇ ಪ್ರತಿಷ್ಠೆಯ ವಿಷಯವಾಗಿ ಇನ್ನೂ ದೊಡ್ಡದಾಗಿ ಪ್ರಿಂಟಿಸಿ ಕಟ್ಟಿಸಬಹುದು ಅಥವಾ ಕೆಲವೊಮ್ಮೆ ಹೊಡೆದಾಟಗಳೂ ಆಗಬಹುದು. ಇಂತಹವುಗಳನ್ನು ಕೆಲವೊಮ್ಮೆ ವಿದ್ಯುತ್‌ಕಂಬಗಳಿಗೆ ತಾಗುವಂತೆ ಕಟ್ಟಿರುತ್ತಾರೆ. ಬಸ್‌ ನಿಲ್ದಾಣಗಳಲ್ಲಿ ಕಟ್ಟಿರುತ್ತಾರೆ. ಆಗೆಲ್ಲ ಅಪಾಯ ಕಟ್ಟಿಟ್ಟ ಬುತ್ತಿ. ಕೆಲವೊಮ್ಮೆ ಕಟ್ಟುವಾಗಲೇ ಅಪಘಾತ ಸಂಭವಿಸಬಹುದು.

ಇಂತಹ ವಿಪರೀತ ಸಂಸ್ಕೃತಿ ಬೇಕೆ? ಸಾಮಾಜಿಕ ಜವಾಬ್ದಾರಿಯುಳ್ಳ ಅಂಗ ಸಂಸ್ಥೆಗಳು ಇಂತಹವುಗಳನ್ನು ತೆರವುಗೊಳಿಸಲಿ ಅಥವಾ ಅದಕ್ಕೆ ಶುಲ್ಕ/ದಂಡ ವಿಧಿಸಿ ಇಂತಹ ಪರಿಪಾಟವನ್ನು ಹದ್ದುಬಸ್ತಿಗೆ ತಂದರೆ, ಆಗ ನಗರದ ಅಂದ (ಇದು ನಿಮ್ಮ ನಗರ, ಶುಚಿಯಾಗಿಡಿ - ಘೋಷಣೆ) ಸಾರ್ಥಕವೆನಿಸುತ್ತದೆ.

ಲೇಖನ: ಚಂದ್ರಶೇಖರ ಬಿ.ಎಚ್.

8 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

idara huchchu miti meeride. nammurina hanamappana jatrege shaashakara dodda ninta uddaneya plaque nillisi kala pakkadalli sannadaagi hanumappana chitra kottiddaru.

aadevarannu kaala pakkakittukondaaayitu namma tevalina raajakeeya jana.

samayochita lekhana.

ಸುಮ ಹೇಳಿದರು...

ನೀವು ಹೇಳುವುದು ಸತ್ಯ. ಹುಟ್ಟಿದಹಬ್ಬಕ್ಕೆ , ವಿದೇಶ ಪ್ರಯಾಣ ಮಾಡುವವರಿಗೆ , ರ‍್ಯಾಂಕ್ ಬಂದವರಿಗೆ , ಮದುವೆಯಾದವರಿಗೆ , ಎಲೆಕ್ಷನ್ ಗೆದ್ದವರಿಗೆ ಶುಭಾಶಯ ತಿಳಿಸುವುದನ್ನು ಕೂಡ ಹೀಗೆ ಪ್ಲೆಕ್ಸ್ ಮಾಡಿಸಿ ಗೋಡೆಗಳಿಗೋ , ಎಲೆಕ್ಟ್ರಿಕ್ ಕಂಬಕ್ಕೋ ನೇತು ಬಡಿದಿರುತ್ತಾರೆ. ಸತ್ತವರು , ಸಿನೆಮಾ , ಯಾವೊದೋ ಪ್ರಾಡಕ್ಟ್ ಜಾಹೀರಾತು ಹೀಗೆ ಎಲ್ಲೆಡೆ ಹೋರ್ಡಿಂಗ್ ಸಾಮ್ರಾಜ್ಯ .... ಛೆ ನಮ್ಮಲ್ಲಿ ಎಚ್ಚರ ಮೂಡುವುದೆಂದೋ.

ದಿನಕರ ಮೊಗೇರ ಹೇಳಿದರು...

innu munde gandhiji pratime mundeyu tamma photo haakikoLLuttaare ee koLaku raajakaaraNigaLu...

bekkina kuttigege ganTe kaTTuvavaru yaaru sir..

oLLeya vishayada bagge barediddiraa sir...

ಸಾಗರದಾಚೆಯ ಇಂಚರ ಹೇಳಿದರು...

sir
namge buddi barodu yavaglo devrige gottu alvaa

V.R.BHAT ಹೇಳಿದರು...

ಒಮ್ಮೆ ಹೇಳಿದರೆ ಕಮ್ಮಿ, ಎರಡನೇ ಸಲ ಹೇಳಿದರೆ ಜಾಸ್ತಿ ! --ಇದು ಬಂಟಿಂಗ್ಸ್ ಹಾಕುವವರಿಗೆ ನಾವು ಹೇಳಬಹುದಾದ ಅನಿಸಿಕೆ. ಎಲ್ಲರೂ ತಮಗೇನೂ ಕಮ್ಮಿಯಿಲ್ಲ ಎಂದು ತೋರಿಸಿಕೊಳ್ಳುವ ಆಡಂಬರದ ಕಣಕ್ಕೆ ಇಳಿದುಬಿಟ್ಟಿದ್ದಾರೆ. ಪರಿಸರದಲ್ಲಿ ಇಂತಹ ಕಸಗಳು ತುಂಬಾ ಇವೆ. ಯಾವನೋ ರೌಡಿ ಸತ್ತರೂ ಅಲ್ಲಲ್ಲಿ ಅವನ ಕಟೌಟ್ ಹಾಕಿ ಹಾರಹಾಕಿದ್ದು ನೋಡಿ ನಕ್ಕಿದ್ದೇನೆ. ಹಿಂದಿನ ನಮ್ಮ ಮೇರು ವ್ಯಕ್ತಿಗಳು ತಮ್ಮ ಸಮಾಜ ಸೇವೆಯನ್ನು ಪ್ರತ್ಯಕ್ಷವಾಗೋ ಪರೋಕ್ಷವಾಗೋ ಮಾಡಿ ಜನಪ್ರಿಯರಾದರೇ ವಿನಃ ಚಿತ್ರಗಳನ್ನು ನೇತುಹಾಕುವ ಮೂಲಕವಲ್ಲ ಅಲ್ಲವೇ? ಇವತ್ತು ಇದನ್ನು ಯಾರಲ್ಲಿ ಹೇಳಬೇಕು. ಆಳುವವರೇ ಹೂಳುತುಂಬುವಾಗ ಇನ್ನು ತುಂಬಿದ ಹೂಳನ್ನು ತೆಗೆದುಹಾಕುವ ಕೆಲಸಕ್ಕೆ ಸಾರ್ವಜನಿಕ ಆಂದೋಲನವಷ್ಟೇ ದಾರಿ, ಲೇಖನ ಚೆನ್ನಾಗಿದೆ, ಧನ್ಯವಾದ.

Ittigecement ಹೇಳಿದರು...

ಚಂದ್ರು...

ನಿಜ ವಯಕ್ತಿಕವಾಗಿರುವ,
ಮನೆಯೋಳಗೆ ಇರಬೇಕಾದಂಥಹ ವಿಷಯಗಳು ಸಾರ್ವಜನಿಕವಾಗಿ ಬಿಟ್ಟರೆ ಕಿರಿಕಿರಿಯಾಗುತ್ತದೆ..

ಯಾವುದೋ ಮರಿ ಪುಢಾರಿಯ ಫೋಟೊಗಳು ನಮ್ಮ ಮನೆಯ ಹತ್ತಿರ ರಾರಾಜಿಸುತ್ತಿವೆ..

ಆ ಪುಣ್ಯಾತ್ಮನ ಹುಟ್ಟಿದ ದಿನ ನಮಗೆಲ್ಲ ಕಿರಿಕಿರಿ...
ಜೊತೆಯಲ್ಲಿ ಕೆಟ್ಟ ಸ್ವರದಲ್ಲಿ ಮೈಕ್ ಹಾವಳಿಗಳು..

ಇದನ್ನೆಲ್ಲ ನಿಷೇಧಿಸ ಬೇಕು...

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ಸಮಯೋಚಿತ ಲೇಖನ.
ಯಾರಿಗೇಂತ ಹೇಳ್ತೀರಿ..??
ಎಷ್ಟೂಂತ ಹೇಳ್ತೀರಿ..??

ನಮ್ಮನ್ನು ದೇವರೇ ಕಾಯಬೇಕು.ಅಷ್ಟೇ..

ಕ್ಷಣ... ಚಿಂತನೆ... ಹೇಳಿದರು...

ನಿಮ್ಮೆಲ್ಲರ ಅಭಿಪ್ರಾಯಗಳನ್ನು, ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಸ್ನೇಹದಿಂದ,